ದೇಯಭಾಗ ಪ್ರತಿಚಯನ
ಪ್ರತಿಚಯವನ್ನು (ಸ್ಯಾಂಪಲ್) ಬಳಸಿ ಸಮಷ್ಟಿಯ ಬಗ್ಗೆ ತಿಳಿಯಲು ಉದ್ದೇಶಿತ ಆಯ್ಕೆಯ (ಪರ್ಪಸ್ಯೂ ಸಲೆಕ್ಷನ್) ಒಂದು ರೂಪ (ಕೋಟಾ ಸ್ಯಾಂಪ್ಲಿಂಗ್).  ಮೂಲತಃ ಗಣಿತಿದಾರನ ಅನುಕೂಲಕ್ಕೆ ಅನುಸಾರವಾದ ವ್ಯಕ್ತಿಗಳುಳ್ಳ ಪ್ರತಿಚಯವನ್ನು ಪಡೆಯುವ ವಿಧಾನವಿದು.  ಈ ಪ್ರತಿಚಯ ಕೆಲವು ಸ್ಥೂಲ ನಿಯಂತ್ರಣಗಳಿಂದ ಮಾತ್ರ ಬಂಧಿತವಾಗಿರುತ್ತದೆ.  ನಿರ್ದಿಷ್ಟ ಸಂಖ್ಯೆಯಲ್ಲಿರುವ (ಕೋಟಾ) ವ್ಯಕ್ತಿಗಳಿಂದ ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಲು ಪ್ರತಿ ಗಣಿತಿದಾರನಿಗೂ ತಿಳಿಸಲಾಗುತ್ತದೆ. ಆದರೆ ವ್ಯಕ್ತಿಗಳ ಆಯ್ಕೆ ಅವನ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು.  ಈ ಆಯ್ಕೆ ತೃಪ್ತಿಪಡಿಸಬೇಕಾದ ನಿಯಂತ್ರಣಗಳ ಮತ್ತು ಗಣತಿದಾರನಿಗೆ ನೀಡಲಾಗುವ ಸೂಚನೆಗಳ ಸ್ವರೂಪ ಸರ್ವೇಕ್ಷಣಾಧಿಕಾರಿಯ ಪರಿಣತ ಅಭಿಪ್ರಾಯವನ್ನು ಅವಲಂಬಿಸಿರುತ್ತದೆ.  ವಯಸ್ಸು, ಲಿಂಗ, ಭೌಗೋಲಿಕವಲಯಗಳು-ಇವು ಸಾಮಾನ್ಯ ಬಳಕೆಯಲ್ಲಿರುವ ನಿಯಂತ್ರಣಗಳು.  ನಿದರ್ಶನಗಳೆಂದರೆ ದತ್ತ ವಯೋವರ್ಗ, ಲಿಂಗ, ಆದಾಯವರ್ಗ ಅಥವಾ ಭೌಗೋಲಿಕ ವಲಯಗಳಿಂದ ನಿರ್ದಿಷ್ಟ ದೇಯಭಾಗ ತುಂಬುವವರೆಗೆ ಮಾಹಿತಿಸಂಗ್ರಹ ನಡೆಸಲು ಗಣಿತಿದಾರರಿಗೆ ಆಣತಿ ನೀಡುವುದು.  ಹೆಚ್ಚಿನ ದೇಯಭಾಗ ಪ್ರತಿಚಯಗಳಲ್ಲಿ ಜನಗಣತಿ ಅಥವಾ ಇತರ ದತ್ತಾಂಶಗಳನ್ನು ಬಳಸಿ ಉಪವರ್ಗಗಳ (ಸ್ತರ) ಗಾತ್ರಗಳನ್ನು ಅಂದಾಜು ಮಾಡಲಾಗುತ್ತದೆ.  ಈ ಉಪವರ್ಗಗಳಲ್ಲಿರುವ ಸಮಷ್ಟಿಗಾತ್ರಗಳಿಗೆ ಅನುಪಾತೀಯವಾಗಿ ಪ್ರತಿಚಯ ದೇಯಭಾಗಗಳನ್ನು ಲೆಕ್ಕಿಸಿ ಗಣತಿದಾರರಿಗೆ ಹಂಚಲಾಗುತ್ತದೆ. ಬಳಿಕ ಅವರು ತಮ್ಮ ದೇಯಭಾಗ ತೃಪ್ತಿಪಡಿಸಬೇಕಾದ ನಿಯಂತ್ರಣಗಳಿಗೆ ಆದಷ್ಟು ಹೊಂದಿಕೊಳ್ಳುವ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ.  ಸಂಭಾವ್ಯತಾ ಪ್ರತಿಚಯನಕ್ಕಿಂತ (ಪ್ರಾಬೆಬಿಲಿಟಿ ಸ್ಯಾಂಪ್ಲಿಂಗ್) ಇಲ್ಲಿ ತಗಲುವ ಖರ್ಚು ಕಡಿಮೆ ಮತ್ತು ಈ ವಿಧಾನ ವ್ಯಾವಹಾರಿಕವಾಗಿ ಹೆಚ್ಚು ಅನುಕೂಲಕರವಾದ್ದರಿಂದ ದೇಯಭಾಗ ಪ್ರತಿಚಯನದ ಬಳಕೆ ಸಾಮಾನ್ಯ.  ಸಮಷ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳ ಯಾದಿಯನ್ನು ಸಿದ್ಧಪಡಿಸಬೇಕಾಗಿಲ್ಲ ಎಂಬುದು ಒಂದು ವ್ಯಾವಹಾರಿಕ ಅನುಕೂಲತೆ.  ಆದರೆ ದೇಯಭಾಗ ಪ್ರತಿಚಯನ ಅಸಂಭಾವ್ಯತಾ ಪ್ರತಿಚಯನವಾದ್ದರಿಂದ ಫಲಿತಾಂಶಗಳ ನಿಷ್ಕøಷ್ಟತೆ ಎಷ್ಟೆಂದು ಹೇಳಲು ಬರದು.  ದೇಯಭಾಗ ಪ್ರತಿಚಯನವನ್ನು ಸ್ತರಗಳೊಳಗೆ ಯಾದೃಚ್ಛಿಕವಲ್ಲದ ಆಯ್ಕೆ ನಡೆಸಲಾಗುವ ಸ್ತರೀಕೃತ ಪ್ರತಿಚಯನವೆಂದೂ ಸ್ಥೂಲವಾಗಿ ನಿರೂಪಿಸಬಹುದು.  ಪ್ರತಿಯೊಂದು ಸ್ತರದಲ್ಲೂ ಅವಶ್ಯವಿರುವ ದೇಯಭಾಗ ತುಂಬುವ ತನಕ ಪ್ರತಿಚಯನವನ್ನು ಗಣಿತಿದಾರ ಮುಂದುವರಿಸುತ್ತಾನೆ.  ಅಭಿಪ್ರಾಯಸಂಗ್ರಹ (ನೋಡಿ- ಗ್ಯಾಲಪ್-ಎಣಿಕೆ), ಮಾರುಕಟ್ಟೆ ಸಂಶೋಧನೆ ಮತ್ತು ಇತರ ಸರ್ವೇಕ್ಷಣೆಗಳಿಗೆ ದೇಯಭಾಗ ಪ್ರತಿಚಯನವನ್ನು ವಾಣಿಜ್ಯಸಂಸ್ಥೆಗಳು ಹೆಚ್ಚಾಗಿ ಉಪಯೋಗಿಸುತ್ತವೆ.
(ಕೆ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ